ಉತ್ತರ ಧ್ರುವದಿಂ ದಕ್ಷಿಣ ಧ್ರುವಕು ಚುಂಬಕ ಗಾಳಿಯು ಬೀಸುತಿದೆ....ಅಂಬಿಕಾತನಯದತ್ತ

June 16, 2011

ಹೀಗೊಬ್ಬ ಗೆಳೆಯ..!

ಮಳೆಗಾಲ ಸುರುವಾದಾಗೆಲ್ಲ ಶಾಲೆ ನೆನಪಾಗುತ್ತದೆ. ಹೊಸ ಪುಸ್ತಕ.. .ಹೊಸ ಪಾಟಿ ಚೀಲ ...ಹೊಸ ರೇನ್ ಕೋಟು  ... ಪ್ಲಾಸ್ಟಿಕ್ ರೇನ್ ಕೋಟಿನ  ಮೇಲೆ   ಬೀಳುವ  ಮಳೆಯ ಪಟಪಟ ಶಬ್ದ .. ಏನೋ  ತವಕ ...ಕುಶಿ... ನಡುಕ...  ಒದ್ದೆ ...ಎಲ್ಲದರ ನೆನಪು

 ನೀನೂ   ನೆನಪಾಗುತ್ತಿಯ . black and white photo ನ೦ತ  ಆಪ್ತ ನೆನಪು... ಆ ದಿನ  ನಮ್ಮ ಶಾಲೆಯಲ್ಲಿ ಎಂಥದ್ದೋ function ,ಶಿಕ್ಷಕರ ದಿನಾಚರಣೆ ಇರಬಹುದು . ಅಕ್ಕೋರು ನಮಗೆಲ್ಲ  ಹೊಸ ಅಂಗಿ ಹಾಕಿಕೊಂಡು ಬರಲು ಹೇಳಿದ್ರು .ನಿನಂದಿದ್ದೆ "..ನಮಗೆಲ್ಲಾ ಎಲ್ಲಿದೆ ಹೊಸ ಅಂಗಿ ಚಡ್ಡಿ ...ಇದೇ ಖಾಕಿ ಚಡ್ಡಿ ..ಬಿಳಿ ಅಂಗಿ.."

ನನಗೆ ನೀನು ವಿಶೇಷವಾಗಿ ಕಂಡಿದ್ದು ನಿನ್ನ ಇಂಥ ಮಾತಲ್ಲೇ ಇರಬೇಕು. ಎಲ್ಲೂ ಪರಿತಾಪದ.. ಅತ್ರಪ್ತಿಯ..ಅಸೂಯೆಯ ಕುರುಹಿಲ್ಲ .ನಿನ್ನನ್ನು ನೀನೆ ತಮಾಷೆ ಮಾಡಿಕೊಳ್ಳುತ್ತ ನಮ್ಮನ್ನೆಲ್ಲಾ ನಗಿಸುತ್ತಿದ್ದೆ .ನಿನ್ನ ಕಪ್ಪು ಬಣ್ಣವನ್ನು" ನಾನು ಸಗಣಿ.. ನೀನು ಹಾಲು.."ಅಂತೆಲ್ಲ  ಏನೇನೋ ಹೇಳುತ್ತಿದ್ದೆ. 

ಆ ದಿನ ಮತ್ತದೇ ಹಿತವಾದ ಮಾತು  ನನಗೆ  "..ಬಿಳಿ ಹೂವಿನ ಅಂಗಿ ಹಾಕಿಕೊಂಡು ಬಾ.. ಅದ್ರಲ್ಲಿ ನೀನು ಚಂದ ಕಾಣುತೀಯ ..    ನಿನ್ನ ಭಾಷಣವೂ  ಇದೆ.. ನೀನು ನಮ್ಮೆಲ್ಲರಿಗಿಂತ ಚಂದ ಕಾಣಬೇಕು.. " ಅ೦ತೆಲ್ಲಾ ಅಂದಿದ್ದೆ .
ರಾತ್ರಿ ಮರೆತೇ ಹೋಯ್ತು ಇದೆಲ್ಲ. 
ಬೆಳಗ್ಗೆ ಎದ್ದಾಗ ಬಿಳಿ ಹೂವಿನ ಅಂಗಿಗಾಗಿ  ಹುಡುಕಾಡಿದ್ದೆ.  ಅಮ್ಮ ಜಡೆ  ಹಾಕಲು ಎಣ್ಣೆ,  ಹಣಿಗೆ, ಕೆಂಪು  ರಿಬ್ಬನ್ನು ..ಎಲ್ಲ ಹಿಡಿದು ಕೂಗುತ್ತಿದ್ದರು.
ಬಟ್ಟೆ ಸ್ಟೆ0ಡಿನ ಮದ್ಯೆ ಎಲ್ಲ ಕೆದರಾಡಿ ಬಿಳಿ ಹೂವಿನ ಅಂಗಿ ಎತ್ತಿಕೊಂಡೆ. ಯಾವಾಗಲೋ ಆಡಲು ಹೋದಾಗ ಹತ್ತಿಕೊ೦ಡ  ಮಣ್ಣು ಒಂದು ಕಡೆ ಹಾಗೆ ಇತ್ತು ."ಶಿ.. ಶಿ..! ನಿನ್ನೇನೆ ತೊಳೆದಿಡಬೇಕಿತ್ತು.." ಅಂದುಕೊಳ್ಳುತ್ತ ಬಚ್ಚಲು   ಮನೆಗೆ ಓಡಿದೆ. ಮಣ್ಣಾದ  ಭಾಗಕ್ಕಷ್ಟಕ್ಕೆ   ಸೋಪು ಹಚ್ಚಿ ಉಳಿದ ಭಾಗ ಒದ್ದೆ ಆಗದಂತೆ  ಹಿಡಿದು ಮಣ್ಣನ್ನು ಉಜ್ಜಿ ತಂಬಿಗೆಯಲ್ಲಿ  ಅದಷ್ಟೇ ಭಾಗವನ್ನು ಅದ್ದಿ  ಹಿ೦ಡಿದೆ.
ಅಮ್ಮ "ನಿನಗೆ ಕೂದಲೂ   ಬಾಚುವದಿಲ್ಲ ..ನೀನು ಶಾಲೆಗೆ  ಹೋಗುವದೂ ಬೇಡ..." ಎಂದು ಸಿಟ್ಟು   ಮಾಡಿಕೊಂಡು ತನಗೆ ಶಾಲೆಗೆ  ತಡವಾಯ್ತು ಎಂದು ಚಪ್ಪಲಿ ಮೆಟ್ಟಿ ಹೊರಟಾಗಿತ್ತು.  ಅಣ್ಣ  ಆಗಲೇ ಅರ್ದ ಗುಡ್ಡೆ ಹತ್ತಿ ಮೇಲಿನಿ೦ದ  ನಾನು ಬರುತ್ತಿದ್ದೇನೋ ಇಲ್ಲವೋ  ಎಂದು ನೋಡುತ್ತಾ ಹೋಗುತ್ತಿದ್ದ .
ನನ್ನ ಗಡಿಬಿಡಿಯಲ್ಲೊ೦ದು ಮೃದು ಮದುರ ಭಾವ ನನ್ನ ಮೆಲ್ಲಗೆ ಸವರಿತ್ತು  .ಎದೆಯಲ್ಲೇನೋ   ಹಾಡು ಮೆಲ್ಲಗೆ ..
ಪೌಡರಿನ ಮುಚ್ಚಳ ತೆಗೆದು ಪೌಡರ್ ಹಚ್ಚಿ ಕೊಳ್ಳುವಾಗ ಅದರ ನವಿರಾದ ಪರಿಮಳ   ಮಧುರ ಭಾವ ಮೂಡಿಸಿತು .  ಅಮ್ಮ ಜಡೆ ಹಾಕದೆ ಹೋಗಿದ್ದು ಒಳ್ಳೆಯದೇ ಆಯಿತು.. ಕೂದಲನ್ನು ಹಾಗೆ ಬಿಟ್ಟು ಚಿಕ್ಕಮ್ಮ ಕೊಡಿಸಿದ್ದ ಮುತ್ತಿನ ಮಣಿಗಳಿದ್ದ  ಕಪ್ಪುಬಣ್ಣ ದ hair band  ತಲೆಗೆ ಏರಿಸಿದೆ. ನಾನು ಚಂದ ಇದ್ದೇನೆ ಎಂದು ಮೊದಲ ಬಾರಿಗೆ ಅನ್ನಿಸಿತ್ತು 

ಎದ್ದು ಬಿದ್ದು ಓಡಿದೆ. ಸುಮಾರು ಲೇಟಾಗಿ ಹೋಗಿತ್ತು ಬಿಳಿ ಹೂವಿನ ಅಂಗಿ ಹಾಕುವ ಗಡಿಬಿಡಿಯಲ್ಲಿ .
ಅಣ್ಣ ಆಗಲೇ ಗುಡ್ಡೆ ಹತ್ತಿ ಶಾಲೆ ಹತ್ತಿರ ಮುಟ್ಟಿದ್ದ. ನನ್ನ ಭಾಷಣ ಬೇರೆ ಇದೆ ..ಓಡುತ್ತ ಹೋದೆ. ಶಾಲೆಯಲ್ಲಿ ಆಗಲೇ ಎಲ್ಲರು ಸಾಲಾಗಿ ನಿ0ತಾಗಿತ್ತು .ದೂರದಲ್ಲಿ ನೀನು ಕೈ ಮಾಡಿ ಬೇಗ ಬಾ.. ಅಂತ ಕರೆಯುತ್ತಿರುವದು ಕಾಣಿಸಿತು.

 ಕಾಲ ಕೆಳಗೆ ಮಳೆ ನೀರಿನ ಕೆಸರಿನ  ಹೊ೦ಡ ಕಾಣಲೇ ಇಲ್ಲ. ಸರಕ್ಕನೆ ಸುಯ್ಯಂತ ಜಾರಿ ಕುಂಡೆಯ  ಮೇಲೆ ಜೋರಾಗಿ ಬಿದ್ದೆ . ಬಿಳಿ ಹೂವಿನ ಅಂಗಿ ಕೊಚ್ಚೆಯಾಗಿತ್ತು. ಮೊಣ ಕೈ  ತರಚಿ ಹೋಗಿತ್ತು .
ಅಕ್ಕೋರು ಬಯ್ಯುತ್ತ  ಸ್ಟೇಜಿಗೆ ಕಳಿಸಿದ್ದರು... "ರಾಧಾಕ್ರಷ್ಣ ರಾಯರು ಸರ್ವಪಲ್ಲಿಯಲ್ಲಿ ಹುಟ್ಟಿದರು ..." ಅಂತೆಲ್ಲ ಶಿಕ್ಷಕರ ದಿನಾಚರಣೆಯ ಬಗ್ಗೆ ಅಮ್ಮ ಬರೆದು ಕೊಟ್ಟ ಭಾಷಣವನ್ನು ಒಂದೇ ಉಸಿರಿಗೆ ಒದರಿದ್ದೆ 

ಎಲ್ಲ ಎಷ್ಟು ಬೇಗ ಮುಗಿದು ಹೋಯ್ತು.. ನಾನು ಸಾವರಿಸಿಕೊಳ್ಳುವ ಮುನ್ನವೇ ..!!
ಹೊರಗೆ ಕಲ್ಲಿನಮೇಲೆ ಕುಳಿತು ಮೊಣ ಕೈ  ನೋಡಿಕೊಂಡೆ. ತರಚಿದ ಗಾಯದಿಂದ ರಕ್ತ ಬರುತ್ತಿತ್ತು. ನೀನು ಅಲ್ಲಿಗೆ  ಬ೦ದು ನಿ0ತಿದ್ದು  ನಾನು ನೋಡಲೇ ಇಲ್ಲ .ನೀನು ಪಟ್ಟಿ ಹಾಳೆಯನ್ನು ಹರಿದು ಅದರಲ್ಲೇ ನನ್ನ ರಕ್ತ ಒರೆಸಿದ್ದೆ   " ..ಎಷ್ಟು  ಚಂದ ಕಾಣ್ತಾ ಇದ್ದೆ  ನೀನು ...ನಿನ್ನ ಅ೦ಗಿಯೆಲ್ಲಾ ಮಣ್ಣಾಗಿ ಹೊಯ್ತು .."ಅ೦ದೆ  ನೀನು. ನನ್ನ ಕಣ್ಣಿನಲ್ಲಿ ಬುಳಬುಳನೆ ನೀರು  ಉಕ್ಕಿ ಬಂತು. ನನ್ನನ್ನೇ ನೋಡುತ್ತಾ ನಿ೦ತ ನೀನು  ನಾನು ಪಟ್ಟ ಅವಾ೦ತರವನ್ನೆಲ್ಲ  ಅರಿತವನ೦ತೆ ಕ೦ಡೆ .

ಮೊನ್ನೆ ಊರಿಗೆ ಬ0ದಾಗ ನಿನ್ನನ್ನು ನೋಡಿದೆ. ಅದೇ ಖಾಕಿ ಬಣ್ಣದ ಮತ್ತಷ್ಟು ದೊಡ್ಡದಾದ ಚಡ್ಡಿ ಹಾಕಿಕೊಂಡು ರಸ್ತೆಯ ಏರಿನ  ಮೇಲೆ ಸಾಯ್ಕಲ್ ದೂಡಿ ಕೊಂಡು ಹೋಗ್ತಾ ಇದ್ದೆ. ಸಾಯ್ಕಲ್ಲ್ಲಿಗೆ ತೂಗು ಹಾಕಿದ ಹಾಲಿನ ಕ್ಯಾನ್ ನೋಡಿ ನೀನು ಹಾಲು ಮಾರುವ ಉದ್ಯೋಗ ಮಾಡುತ್ತಿರಬೇಕು  ಅ೦ದು ಕೊಂಡೆ.  ನಿನ್ನ ಮುಖದಲ್ಲಿ ಯಾವ ಭಾವನೆಗಳು ಕಾಣಲಿಲ್ಲ .ನೀನು ನನ್ನನ್ನು ಗಮನಿಸಲೂ  ಇಲ್ಲ .ಅದೆಷ್ಟು ಮಳೆಗಾಲ ಕಳೆದು ಹೋದವೇನೋ  ನಿನ್ನ ಈ ಹಾಲು ಮಾರಾಟದ ಬದುಕಿನಲ್ಲಿ .



3 comments:

ಸಾಗರದಾಚೆಯ ಇಂಚರ said...

ತುಂಬಾ ಆಪ್ತವಾದ ಬರಹ ''ಸುಪ್ತ'' ದಲ್ಲಿ :)

ಹಳೆಯ ನೆನಪುಗಳ ಕೆದಕುವಿಕೆಯ ಸಂತಸ ಬಲು ಸೊಗಸು ಅಲ್ಲವೇ

ಚೆಂದದ ಬರಹ

Unknown said...

ನಿಮ್ಮ ಬರವಣಿಗೆ ನನ್ನನ್ನು ಬಾಲ್ಯದ ದಿನಗಳಿಗೆ ಕರೆದೊಯ್ಯಿತು
ನಿಜಕ್ಕೂ ಅದ್ಬುತವಾದ ಬರವಣಿಗೆ
ಧನ್ಯವಾದಗಳು

supta said...

ನೆನಪುಗಳು ..ಮಳೆ ಬಂದಾಗೆಲ್ಲಾ ಮನಸನ್ನು ಹಸಿ ಮಾಡುವ ಬಾಲ್ಯದ ನೆನಪುಗಳು... ಧನ್ಯವಾದಗಳು

Post a Comment