ಉತ್ತರ ಧ್ರುವದಿಂ ದಕ್ಷಿಣ ಧ್ರುವಕು ಚುಂಬಕ ಗಾಳಿಯು ಬೀಸುತಿದೆ....ಅಂಬಿಕಾತನಯದತ್ತ

February 21, 2011

ಕುಂತಿ ಮತ್ತು ಸಮುದ್ರ

ಕಟ್ಟೆಯ ಮೇಲೆ ಕುಳಿತು ಬೇಸರವಾಗಿ ಕುಂತಿ ಮೆಲ್ಲಗೆ ಇಣುಕಿ ನೋಡಿದಳು. ಕುಂತಿಯ ಅಪ್ಪ ಹೊರಟು ನಿಂತಿದ್ದ. ದಣಪೆ ದಾಟಿ ಹಿತ್ತಲ ಕಡೆಗೆ ಹೊರಟ ಕುಂತಿಯ ಅಪ್ಪ .

ಕುಂತಿ ಮೆಲ್ಲಗೆ ಕಟ್ಟೆಯಿಂದ ಇಳಿದು ಹಿಂಬದಿ ನೋಡಿಕೊಂಡಳು.ಸೊಂಟದ ಸುತ್ತ ಉಟ್ಟ ಸೀರೆಯ ತುಂಡು ಅಮ್ಮನ ನೆನಪು ಮಾಡಿತ್ತು . ದೂರದಲ್ಲಿ ಕುಂಟಾಟ  ಆಡುವ ತಂಗಿ,ಮತ್ತು  ಗೆಳತಿಯರು ಕರೆದಂತಾಯ್ತು.
 ಆಗಲೇ ಅಪ್ಪ ಪಂಜೆಯಲ್ಲಿ ಹಿತ್ತಲಿನಿದ ಕೊಯ್ದ ಹೀರೆ ಕಾಯಿ ಮತ್ತು ಬದನೆ ಕಾಯಿ ಕಟ್ಟಿಕೊಂಡು ಮುಳ್ಳು  ಬೇಲಿಯ  ಕದ ಹಾಕಿ ಭಟ್ಟರ ಮನೆಗೆ ಹೊರಟಿದ್ದ.

ಕುಂತಿಗೆ ಕೂತು ಕೂತು ಬೇಸರ ಬಂತು . ಸೂರ್ಯ ಮುಳುಗುವ ಮುನ್ನ ಒಮ್ಮೆ ಸಮುದ್ರಕ್ಕೆ ಹೋಗಿ ಬರುವ ಅಂದುಕೊಂಡಳು. ಅಪ್ಪ ತಾನು ಬರುವ ವರೆಗೆ ಎಲ್ಲೂ ಹೋಗಬೇಡ ಎಂದು ಗದರಿಸಿ ಹೇಳಿಹೋಗಿದ್ದ.

ಭಟ್ಟರ ಮನೆಯ ಅಂಗಳದಲ್ಲಿ ನಿಂತಿದ್ದ  ಕುಂತಿಯ ಅಪ್ಪ ಹಿತ್ತಲಲ್ಲಿ ಬೆಳೆದ ತರಕಾರಿಯನ್ನು ಭಟ್ಟರ ಮಗನ ಕ್ಯೆಗೆ ಕೊಟ್ಟ. ಭಟ್ಟರು ಹೊರಗೆಬಂದು ಬಂದ ಕಾರಣ ಕೇಳಿದರು ."ಮಗಳು ಮುಟ್ಟಾಗಿದ್ದಾಳೆ ದಿನ ನೋಡು "ಅಂದ ಕುಂತಿಯ ಅಪ್ಪ. ಭಟ್ಟರು ಪಂಚಾಂಗ ತೆಗೆದರು. ಭಟ್ಟರ ಮುಖ ಸೀರಿಯಸ್ಸಾಗಿ ಕಂಡಿತು ಕುಂತಿಯ ಅಪ್ಪನಿಗೆ. ಏನೋ ಹೆದರಿಕೆ ತಳಮಳ ಹೊಟ್ಟೆಯಲ್ಲಿ. 
ಭಟ್ಟರು" ಕುಂತಿ ಸಮುದ್ರಕ್ಕ ಹೋಗಿ ಮೀಯುವ ಹಾಗಿಲ್ಲ ..ನಿನ್ನ ಮನೆಯ ಹಿತ್ತಲಲ್ಲೇ ಬಾವಿ ತೆಗೆಸು.. ಅವಳು ಅಲ್ಲಿಯೇ ಮೀಯಲಿ" ಅಂದು ಬಿಟ್ಟರು.

ಕುಂತಿಯ ಅಪ್ಪ ಗಡಿಬಿಡಿಯಲ್ಲಿ ಮನೆಗೆ ಬಂದ. ಕುಂತಿ ಇನ್ನೂ ಕಟ್ಟೆಯ ಮೇಲೆ ಕುಳಿತಿದ್ದು ನೋಡಿ ಸಮಾಧಾನವಾಯ್ತು. ಕೇರಿಯ ಮಕ್ಕಳನ್ನು ಕರೆದು  ಅರ್ಜೆಂಟಾಗಿ ಹಿತ್ತಲಲ್ಲಿ ಬಾವಿಕಡೆಯಲು ಹೇಳಿದ . ಸೊಂಟದ ತನಕ ಹೊಂಡ ತೆಗೆದದ್ದೇ ನೀರಿನ ಸೆಲೆ ಉಕ್ಕಿ ಬಂತು.  ಕೇರಿಯ ಹುಡುಗರು ನೀರು ಬಂದದ್ದೆ ಹೊರತು ನಿಂತರು . ಕುಂತಿಯ ಅಪ್ಪ ಮಗಳಿಗೆ ಆ ಕೆರೆಯ ಹೊಂಡದಲ್ಲೇ ಮೀಯಬೇಕು ಅಂದ   

ಕುಂತಿ ಅಪ್ಪನನ್ನೇ ದುರುಗುಟ್ಟಿ ನೋಡಿದಳು.ಸೂರ್ಯಮುಳುಗಲು ಇನ್ನು ಕಾಯುತ್ತಿದ್ದ . ಕುಂತಿ ಹೊರಟು ನಿಂತಳು ."ಕೆರೆಯ ಹೊಂಡದಲ್ಲಿ ಕೇರೆ ಹಾವಿನಂತೆ ಬಡಿದಾದುತ್ತ ನಾನು ಮೀಯುವವಳಲ್ಲ.. .ಸಮುದ್ರಕ್ಕ ಹೋಗಿ ಮೀನಿನಂತೆ ಮೀಯುತ್ತೇನೆ "ಎಂದು ಹೇಳಿಬಿಟ್ಟಳು 
ಕುಂತಿಯ ಅಪ್ಪ ಅಸಹಾಯಕನಂತೆ ನೋಡುತ್ತಾ ಉಳಿದ. ಏನು ಆಗಬೇಕೋ ಅದು ಆಗಿಯೇ ತೀರಬೇಕಿತ್ತು .

ಕುಂತಿ ಬರುವದನ್ನೆ ಕಾಯುತ್ತಿದ್ದ ಸೂರ್ಯ. ಸಮುದ್ರದ ನೀರೆಲ್ಲ ರಂಗಾಗಿತ್ತು ..ಚಿನ್ನಂತೆ ಹೊಳೆಯುತ್ತಿತ್ತು. ಸಮುದ್ರ ತೀರದಲ್ಲಿ ಸೂರ್ಯನನ್ನು ಬಿಟ್ಟರೆ ಮತ್ಯಾರು ಇಲ್ಲ !!. ಕುಂತಿ ಮರಳಮೇಲೆ ತನ್ನ ಹೆಜ್ಜೆ ಮೂಡಿಸುತ್ತ ನಡೆದಳು .ನೊರೆಯಂತ ತೆರೆ ಕುಂತಿಯ ಪಾದಕ್ಕೆ ಮುತ್ತಿಕ್ಕಿ ವಾಪಸ್ಸಾಯಿತು. ಕುಂತಿ ಮುಂದೆ ನಡೆದಳು. ಸೂರ್ಯ ಮತ್ತಷ್ಟು ಕೆಳಗೆ ಜಾರಿದ್ದ. ಕುಂತಿ ಮೊಣಕಾಲಿನವರೆಗೆ ..ಸೊಂಟದವರೆಗೆ ನಡೆದಳು. ಸೂರ್ಯ ಸಮುದ್ರದ ಅಂಚಿಗೆ ಸದ್ದಿಲ್ಲದೇ  ಸರಿದಿದ್ದ. ಕುಂತಿ  ಕುತ್ತಿಗೆಯ  ತನಕ ನೀರಿಗಿಳಿದಳು  .ಸೂರ್ಯ ಸಮುದ್ರದಲ್ಲಿ  ಪೂರ್ತಿ  ಮುಳುಗಿದ್ದ. ಸಮುದ್ರದ ನೀರೆಲ್ಲ  ನೆತ್ತರಿನಂತೆ ಕೆ೦ಪಾಗಿತ್ತು .
      
ಆಧಾರ : ಬುಡಕಟ್ಟು ಮಹಾಭಾರತ 


No comments:

Post a Comment